ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪದೇಪದೆ ಟೋಲ್ ಪಾವತಿಸುವ ಸ್ಥಳೀಯ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಸಿಗಲಿದೆ. ಟೋಲ್ ಪ್ಲಾಜಾದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ನಿವಾಸಿಗಳಿಗೆ ನವೆಂಬರ್ 1ರಿಂದ ವಾರ್ಷಿಕ ರಿಯಾಯಿತಿ ಫಾಸ್ಟ್‌ಟ್ಯಾಗ್ ಪಾಸ್ (FASTag Pass) ಪಡೆಯಲು ಅವಕಾಶ ನೀಡಲಾಗುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಈ ಹೊಸ ವ್ಯವಸ್ಥೆಯಿಂದ ಪ್ರತಿದಿನ ಅಥವಾ ಆಗಾಗ್ಗೆ ಟೋಲ್ ಮೂಲಕ ಸಂಚರಿಸುವ ಸ್ಥಳೀಯರಿಗೆ ವಾರ್ಷಿಕ ವೆಚ್ಚ ಕಡಿಮೆಯಾಗಲಿದೆ. ಇದುವರೆಗೆ ತಿಂಗಳ ಪಾಸ್‌ಗಾಗಿ ಹಣ ಪಾವತಿಸುತ್ತಿದ್ದವರು ಹೊಸ ದರದ ಪ್ರಕಾರ ವಾರ್ಷಿಕ ಪಾಸ್ ಪಡೆದು ಹಣ ಉಳಿಸಬಹುದು.

ನಗರ ಮತ್ತು ಹೊರವಲಯಕ್ಕೆ ಪ್ರತ್ಯೇಕ ದರ
ಟೋಲ್ ಪ್ಲಾಜಾ ನಗರ ಅಥವಾ ಸ್ಥಳೀಯ ಪಟ್ಟಣದ ಮಿತಿಯ ಹೊರಗಿದ್ದರೆ, ಅದರ ಸುತ್ತಮುತ್ತ ವಾಸಿಸುವ ಅರ್ಹರಿಗೆ ವಾರ್ಷಿಕ ಪಾಸ್ ₹1,500ಕ್ಕೆ ಸಿಗಲಿದೆ. ಅದೇ ಟೋಲ್ ಪ್ಲಾಜಾ ನಗರ ಮಿತಿಯೊಳಗಿದ್ದರೆ ಸ್ಥಳೀಯ ನಿವಾಸಿಗಳು ₹3,000 ಪಾವತಿಸಬೇಕಾಗುತ್ತದೆ.
ಪ್ರಸ್ತುತ ತಿಂಗಳಿಗೆ ₹360 ಪಾವತಿಸಿ ಸ್ಥಳೀಯ ಮಾಸಿಕ ಪಾಸ್ ಪಡೆಯುವವರಿಗೆ ವರ್ಷಕ್ಕೆ ಒಟ್ಟು ₹4,320 ವೆಚ್ಚವಾಗುತ್ತಿದೆ. ಹೊಸ ವಾರ್ಷಿಕ ವ್ಯವಸ್ಥೆಯಲ್ಲಿ ನಗರ ಹೊರವಲಯದ ನಿವಾಸಿಗಳಿಗೆ ₹2,820 ಹಾಗೂ ನಗರ ವ್ಯಾಪ್ತಿಯ ನಿವಾಸಿಗಳಿಗೆ ₹1,320 ಉಳಿತಾಯವಾಗಲಿದೆ.
ಯಾರಿಗೆ ಈ ಪಾಸ್ ಸಿಗಲಿದೆ?
ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಮತ್ತು ಮಾನ್ಯವಾದ, ಕಾರ್ಯನಿರ್ವಹಿಸುತ್ತಿರುವ ಫಾಸ್ಟ್‌ಟ್ಯಾಗ್ ಹೊಂದಿರುವ ಅರ್ಹ ವಾಣಿಜ್ಯೇತರ ವಾಹನಗಳ ಮಾಲೀಕರು ಈ ಸೌಲಭ್ಯ ಪಡೆಯಬಹುದು. ಆದರೆ ಈ ಪಾಸ್ ಎಲ್ಲ ಹೆದ್ದಾರಿಗಳಲ್ಲೂ ಬಳಸಲು ಸಾಧ್ಯವಿಲ್ಲ.
