ರಾಜ್ಯದಲ್ಲಿ ಮಾಂಜಾ ದಾರದಿಂದ ಸಂಭವಿಸುತ್ತಿರುವ ಅನಾಹುತಗಳಿಗೆ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ಖಂಡನೆ

ವಿಜಯಪುರ : ಮಾಂಜಾ ದಾರದ ಬಳಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಅಪ್ಪುರಾಜ್ ನಿಮಾದಾರ ಆಗ್ರಹ. ರಾಜ್ಯದ ವಿವಿಧೆಡೆ ಗಾಳಿಪಟ ಹಾರಿಸಲು ಬಳಸಲಾಗುತ್ತಿರುವ ಅಪಾಯಕಾರಿ ಮಾಂಜಾ ದಾರದಿಂದ ಜನಸಾಮಾನ್ಯರು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ಪಕ್ಷಿಗಳಿಗೆ ಗಾಯಗಳಾಗುತ್ತಿರುವುದು ಮತ್ತು ಪ್ರಾಣಾಪಾಯದ ಘಟನೆಗಳು ಸಂಭವಿಸುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇಂತಹ ಅಪಾಯಕಾರಿ ದಾರದಿಂದ ಉಂಟಾಗುತ್ತಿರುವ ಅನಾಹುತಗಳನ್ನು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.), ಬೆಂಗಳೂರು ರಾಜ್ಯಾಧ್ಯಕ್ಷರಾದ ಶ್ರೀ ಅಪ್ಪುರಾಜ್ ನಿಮಾದಾರ ಅವರು ತೀವ್ರವಾಗಿ ಖಂಡಿಸಿದ್ದಾರೆ.

       

 ಮಾಂಜಾ ದಾರವು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳಿಗೆ ದಾರ ಸಿಲುಕಿ ಗಂಭೀರ ಗಾಯಗಳಾಗುವ ಸಾಧ್ಯತೆಯಿದೆ. ಅಲ್ಲದೆ, ಪಕ್ಷಿಗಳ ಜೀವಕ್ಕೂ ಈ ದಾರ ಮಾರಕವಾಗುತ್ತಿದೆ. ಮನರಂಜನೆಗಾಗಿ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ಇತರರ ಜೀವಕ್ಕೆ ಅಪಾಯ ಉಂಟುಮಾಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಅವರು ತಿಳಿಸಿದ್ದಾರೆ.

 ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಮಾಂಜಾ ದಾರದ ಅಕ್ರಮ ಮಾರಾಟ ಮತ್ತು ಬಳಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಷೇಧಿತ ಹಾಗೂ ಅಪಾಯಕಾರಿ ದಾರವನ್ನು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

          “ಜನರ ಜೀವ ಅಮೂಲ್ಯ. ಗಾಳಿಪಟದ ಸಂಭ್ರಮ ಯಾರದೋ ಮನೆಯ ದುಃಖಕ್ಕೆ ಕಾರಣವಾಗಬಾರದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಸುರಕ್ಷತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಮಾಂಜಾ ದಾರದ ಬಳಕೆಯನ್ನು ತಡೆಗಟ್ಟಲು ಸರ್ಕಾರ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು” ಎಂದು ಅಪ್ಪುರಾಜ್ ನಿಮಾದಾರ ಅವರು ಆಗ್ರಹಿಸಿದ್ದಾರೆ.

 ಸಮಾಜದ ಎಲ್ಲ ನಾಗರಿಕರು ಅಪಾಯಕಾರಿ ಮಾಂಜಾ ದಾರವನ್ನು ಬಳಸುವುದನ್ನು ತಪ್ಪಿಸಿ, ಸುರಕ್ಷಿತ ಪರ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾರ್ವಜನಿಕರ ಜೀವ ರಕ್ಷಣೆ ಹಾಗೂ ಪಕ್ಷಿಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!